ಅಕಾಕಿ ಕೋಟು: ಇದು ರಷ್ಯಾದ ಪ್ರಸಿದ್ಧ ಲೇಖಕ ನಿಕೊಲೊಯ್ ಗೊಗೊಲ್ನ ಪ್ರಸಿದ್ಧ ನೀಳ್ಗತೆಯಾದ ಓವರ್ಕೋಟ್ ಎಂಬ ಕತೆಯ ರಂಗರೂಪ. ಈ ಕತೆಯನ್ನು ರಂಗದ ಮೇಲೆ ತರುವುದು ನಿಜವಾಗಿಯೂ ಸವಾಲಿನ ಕೆಲಸ. ಏಕೆಂದರೆ ಇಲ್ಲಿನ ನಾಟಕೀಯತೆಯೆಲ್ಲವೂ ಮನೋಗತವಾಗಿರುವಂಥವು; ಅಂಥದನ್ನು ಮತ್ತೊಮ್ಮೆ ಚನ್ನಕೇಶವ ಅವರು ಅವರ ಮೇಳದ ಗುಂಪು, ಸಂಗೀತ, ರಂಗ ಸಜ್ಜಿಕೆ ಮೊದಲಾದ ಪರಿಕರಗಳ ಮೂಲಕ ರಂಗರೂಪಕ್ಕೆ ತಂದಿದ್ದಾರೆ. ಊರು, ಪಾತ್ರಗಳ ಹೆಸರು ಎಲ್ಲವೂ ರಷ್ಯಾದ್ದೇ ಆಗಿದ್ದರೂ ನಡುನಡುವೆ ಇದ್ದಕ್ಕಿದ್ದಂತೆ ಮನೆಮಾಲಕಿಯ ಪಾತ್ರ ತೆಲುಗಿನಲ್ಲಿ ಮಾತನಾಡುತ್ತದೆ. ಇಂಥ ಅನೇಕ ನಾಟಕೀಯತೆಯನ್ನು ಬಹಳ ಸಲೀಸಾಗಿ ಬಳಸುವ ಮೂಲಕ ಚನ್ನಕೇಶವ ಅವರು ದೂರದ ರಷ್ಯಾದ ಕತೆಯನ್ನು ನಮ್ಮ ನಿಮ್ಮ ಸುತ್ತಲೂ ನಡೆಯಬಹುದಾದ ಕತೆ ಎಂಬಂತೆ ತಂದು ನಿಲ್ಲಿಸುತ್ತಾರೆ. ಇನ್ನು ಈ ಕಥೆಯ ಮುಖ್ಯ ಜೀವಾಳವೇ ಒಂದು ಒಳ್ಳೆಯ ಓವರ್ಕೋಟು. ರಷ್ಯಾದ ಕೊರೆಯುವ ಚಳಿಗಾಲವನ್ನು ತಡೆದುಕೊಳ್ಳಬೇಕೆಂದರೆ ಒಂದೊಳ್ಳೆ ಕೋಟು ಬೇಕು ನಮ್ಮ ಕಥಾನಾಯಕನಿಗೆ. ಸದಾ ಹಿಮಸುರಿವ ರಷ್ಯಾದ ಅಂತಹ ಚಳಿಗಾಲವನ್ನು ಚನ್ನಕೇಶವ ಅವರು ಹೇಗೆ ರಂಗದ ಮೇಲೆ ತಂದಿದ್ದಿರಬಹುದು ಎಂಬ ಕುತೂಹಲ ನನಗೆ ಖಂಡಿತಾ ಇದೆ.
ಕೋಟೆಮನೆ ಪೋಲೀಸ್ ಸ್ಟೇಷನ್: ಉತ್ತರಕನ್ನಡ ಜಿಲ್ಲೆ ಯಲ್ಲಾಪುರದ ಬಳಿಯ ಮಂಚಿಕೇರಿ ಎಂಬ ಹಳ್ಳಿಯೊಂದರಲ್ಲಿ ವಾಸವಾಗಿರುವ ಸಿದ್ದಿ ಜನಾಂಗದ (ನೂರಾರು ವರ್ಷಗಳ ಹಿಂದೆ ಬ್ರಿಟಿಷರ ದಬ್ಬಾಳಿಕೆಯ ಫಲವಾಗಿ ಆಫ್ರಿಕಾದಿಂದ ಗುಲಾಮರಾಗಿ ಭಾರತಕ್ಕೆ ಬಂದು ಇಲ್ಲೇ ನೆಲೆಯೂರಿ ಕನ್ನಡದವರೇ ಆಗಿಹೋದ ಸಮುದಾಯ) ಹೆಣ್ಣುಮಗಳೊಬ್ಬಳ ಅತ್ಯಾಚಾರ ಹಾಗೂ ಕೊಲೆಯೊಂದು ನಡೆಯುತ್ತದೆ. ಅದನ್ನು ವಿಚಾರಣೆ ನಡೆಸಲು ಕಾಡಿನ ನಡುವೆ ಇರುವ ಪುಟ್ಟ ಊರೊಂದರ ಪೋಲೀಸ್ ಸ್ಟೇಷನ್ ಇಡೀ ಕಥಾನಕದ ಕೇಂದ್ರ ವಸ್ತುವಾಗಿ ಮುಂದೆ ಬರುತ್ತದೆ. ಈ ಅತ್ಯಾಚಾರ ಹಾಗೂ ಕೊಲೆಯು ಒಬ್ಬೊಬ್ಬರ ಬಾಯಲ್ಲಿ ಒಂದೊಂದು ತಿರುವು ಪಡೆದುಕೊಳ್ಳುತ್ತ ಪ್ರಕರಣ ಜಟಿಲವಾಗುತ್ತ ಸಾಗಿ ಸತ್ಯ ಯಾವುದು ಎಂಬುದೇ ಗೋಚರಿಸದೇಹೋಗುತ್ತದೆ. ಜಪಾನಿನ ಜಗತ್ಪ್ರಸಿದ್ಧ ಸಿನಿಮಾ ನಿರ್ದೇಶಕ ಅಕಿರಾ ಕುರೊಸವಾನ ರಶೋಮನ್ ಎಂಬ ಸಿನಿಮಾದ ಕತೆಯನ್ನು ನೆನಪಿಸುವಂತಿದೆ ಈ ನಾಟಕ. ಈ ನಾಟಕದಲ್ಲಿ ಸಿದ್ಧಿ ಸಮುದಾಯದ ಜನಪದ ಹಾಡುಗಳು, ನುಡಿಗಟ್ಟುಗಳು, ಆಚರಣೆಗಳು, ಕೊಂಕಣಿ ಭಾಷೆ, ಇವೆಲ್ಲವನ್ನೂ ಬಹಳ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ ಚನ್ನಕೇಶವ ಅವರು. ಅವರ ಬೇರೆ ನಾಟಕಗಳಿಗೂ ಈ ನಾಟಕಕ್ಕೂ ಬಹಳ ವ್ಯತ್ಯಾಸವನ್ನು ಕಾಣಬಹುದಾಗಿದೆ. ಈ ನಾಟಕವನ್ನೂ ಸಹ ಅವರು ಮಂಚಿಕೇರಿಯ ಸಿದ್ದಿ ಸಮುದಾಯದವರೊಂದಿಗೆ ಕಲೆತು ಬೆರೆತು ಅಲ್ಲಿಯೇ ನಾಟಕ ರಚನೆ ಮಾಡಿರುವ ಸಾಧ್ಯತೆ ಇದೆ.
ಕಂತು: ವಿವೇಕ ಶಾನಭಾಗರ ಕಂತು ಎಂಬ ಕತೆಯನ್ನು ಆಧರಿಸಿ ಮಾಡಿದ ರಂಗರೂಪ ಈ ನಾಟಕ. ಉತ್ತರ ಕನ್ನಡ ಜಿಲ್ಲೆಯ ಮಾವಿನೂರು ಎಂಬ ಊರೊಂದು ಏಕಾಏಕಿ ಎರಡು ಮಹತ್ತರ ಕಾರಣಗಳಿಂದ ಇಡೀ ದೇಶ ವಿದೇಶಗಳ ಚರ್ಚೆಯ ವಿಷಯವಾಗಿ ಬಿಡುತ್ತದೆ; ಒಂದು, ಮುಂದೆ ಬರಲಿರುವ ಖಗ್ರಾಸ ಸೂರ್ಯಗ್ರಹಣವು ಸಂಪೂರ್ಣವಾಗಿ ಗೋಚರಿಸುವುದು ಈ ಊರಿನಿಂದ ಎಂಬುದು ಜಗತ್ತಿನಲ್ಲೇ ಆ ಊರಿಗೊಂದು ವಿಶೇಷ ಸ್ಥಾನ ತಂದುಕೊಟ್ಟರೆ, ಸರ್ಕಾರ ತರಲು ಇಚ್ಛಿಸಿರುವ ಅಣೆಕಟ್ಟೆ ಯೋಜನೆಯಿಂದ ಅನೇಕ ಊರುಗಳ ಜೊತೆಗೆ ಆ ಊರು ಮುಳುಗಡೆ ಆಗಲಿರುವುದು ಮತ್ತೊಂದು ವಿಷಯ. ಈ ಎರಡು ವಿಷಯಗಳ ನಡುವೆ ಆ ಊರಿನ ಪಾತ್ರಗಳು ಹೇಗೆಲ್ಲ ಬದುಕಿ ಬಾಳುತ್ತವೆ ಎಂಬುದು ಈ ಕತೆಯ ಕಥಾವಸ್ತು. ಈ ಕಥೆಯನ್ನು ಚನ್ನಕೇಶವ ಅವರು ಮೊದಲು ನಾಟಕ ರೂಪ ಮಾಡಿ ಆಡಿಸಿದ್ದು ಯಲ್ಲಾಪುರ ಬಳಿಯ ಮಂಚಿಕೇರಿ ಎಂಬ ಊರಿನ ಜನಕ್ಕೆ. ಅಲ್ಲೇ ಕುಳಿತು ಅಲ್ಲಿನ ಜನರ ಆಡು ನುಡಿಗಳನ್ನು ಬಳಸಿಕೊಂಡು ರಂಗರೂಪ ಮಾಡಿದ್ದಾರೆ ಚನ್ನಕೇಶವ ಅವರು. ನಂತರ ಇದನ್ನು ಅವರು ನೀನಾಸಮ್ ರಂಗಶಿಕ್ಷಣ ಕೇಂದ್ರಕ್ಕೆ ಆಡಿಸಿದರು. ಅಲ್ಲಿ ನಟನಾಗಿ ಹಾಗೂ ತಂತ್ರಜ್ಞನಾಗಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಒದಗಿದ್ದು ನನ್ನ ಪುಣ್ಯ ಎಂದೇ ಭಾವಿಸುತ್ತೇನೆ. ಇಲ್ಲಿ ನನಗೆ ಅವರು ನಾಟಕವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೀರಾ ಒಳಗಿನ ಸಂಪನ್ಮೂಲವಾಗಿ ಕಾಣುವ ಅವಕಾಶ ನನಗೆ ಒದಗಿ ಬಂದಿತ್ತು. ನಾಟಕ ನಿರ್ದೇಶನದ ಎಲ್ಲ ವಿಭಾಗಗಳನ್ನೂ ಅವರು ನಿರ್ವಹಿಸುತ್ತಿದ್ದ ರೀತಿಯನ್ನು ನೋಡಲು ಹಾಗೂ ಅದನ್ನು ಮುಂದೆ ಅವಲೋಕಿಸಿಕೊಳ್ಳಲು ಇದರಿಂದ ನನಗೆ ಅನುಕೂಲವಾಯಿತು. ಉತ್ತರಕನ್ನಡ ಭಾಷೆಯನ್ನು, ಹಾಗೂ ಕಥೆಯನ್ನು ದೃಶ್ಯಗಳಾಗಿ ಮಾಡಿಕೊಂಡಿರುವ ರೀತಿ, ಮತ್ತು ಒಂದು ಸ್ವತಂತ್ರ ನಾಟಕವೊಂದಕ್ಕೆ ಇರಬೇಕಾದ ಸಂರಚನೆಯೊಂದು ಈ ರಂಗರೂಪಕ್ಕೆ ಸಿಕ್ಕಿರುವುದು ಮತ್ತೂ ಒಂದು ವಿಶೇಷ.
Additional information
| Number of pages | 202 |
|---|---|
| Year of Publication | 2022 |
| Author | ಚನ್ನಕೇಶವ |
| Publisher | ಥಿಯೇಟರ್ ತತ್ಕಾಲ್ ಬುಕ್ಸ್ |





Reviews
There are no reviews yet.